ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸ೦ದರ್ಶನ
Share
ಕೆರೆಮನೆ ಶಿವಾನಂದ ಹೆಗಡೆ ಅವರ ಸಂದರ್ಶನ

ಲೇಖಕರು : ಸುರೇಶ ಎಚ್. ಸಿ.
ಶುಕ್ರವಾರ, ಜುಲೈ 19 , 2013

ಕೆರೆಮನೆ ಶಿವಾನಂದ ಹೆಗಡೆ

ಸಿಂಗಪುರದ ಎಸ್‌ಪ್ಲನೇಡ್‌ನ ತೆರೆದ ಸಭಾಂಗಣದಲ್ಲಿ "ಕಲಾ-ಉತ್ಸವ 2012"ದ ಪ್ರಯುಕ್ತ ಒಟ್ಟು 8 ಯಕ್ಷಗಾನ ಕಿರುಪ್ರಸಂಗದ ಪ್ರದರ್ಶನಗಳನ್ನು ನೀಡಿದ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ, ಕೆರೆಮನೆಯ ನಿರ್ದೇಶಕರಾದ ಕೆರೆಮನೆ ಶಿವಾನಂದ ಹೆಗಡೆ ಅವರ ಜೊತೆ ಒಂದು ಕಿರು-ಸಂದರ್ಶನ ನಡೆಸುವ ಭಾಗ್ಯ ನನಗೆ ದೊರೆತಿತ್ತು. ಈ ಸಂದರ್ಶನದ ತುಣುಕುಗಳು.




ಪ್ರಶ್ನೆ : ನಮಸ್ಕಾರ. ನೀವು ಸಿಂಗಪುರಕ್ಕೆ ಬಂದದ್ದು ಹೇಗೆ? ನಿಮ್ಮನ್ನು ಕಲಾ ಉತ್ಸವಕ್ಕೆ ಕರೆಸಿದ್ದು ಯಾರು?

ಶಿವಾನಂದ ಹೆಗಡೆ : ಎಸ್‌ಪ್ಲನೇಡ್‌ನ ಅರವಿಂದ್ ಕುಮಾರಸ್ವಾಮಿ ಅವರು ನಮ್ಮ ತಂಡ 2011 ಡಿಸೆಂಬರ್‌ನಲ್ಲಿ ಚೆನ್ನೈನಲ್ಲಿ ನಡೆಸಿಕೊಟ್ಟ ಯಕ್ಷಗಾನವನ್ನು ನೋಡಿ ಮೆಚ್ಚಿದ್ದರು. ಅವರೇ ನಮ್ಮನ್ನು ಸಂಪರ್ಕಿಸಿ, ಕಲಾ-ಉತ್ಸವ 2012ರಲ್ಲಿ ನಮ್ಮ ಕಾರ್ಯಕ್ರಮವನ್ನು ನೀಡಬೇಕೆಂದು ಕೋರಿಕೊಂಡರು.

ಪ್ರಶ್ನೆ : ಕಳೆದ ಮೂರು ದಿನಗಳಿಂದ ನೀವು ಇಲ್ಲಿ ಯಕ್ಷಗಾನವನ್ನು ಮಾಡಿದ್ದೀರಿ. ಕನ್ನಡಿಗರಿಗೆ ಹಾಗೂ ಬಹುತೇಕ ಭಾರತೀಯರಿಗೆ ಯಕ್ಷಗಾನ ಕಲೆ ಗೊತ್ತಿದೆ. ಈ ಕಲೆ ಗೊತ್ತಿಲ್ಲದವರ ಪ್ರತಿಕ್ರಿಯೆ ಹೇಗಿತ್ತು?

ಶಿವಾನಂದ ಹೆಗಡೆ : ಹೌದು, ಸಾಕಷ್ಟು ಪ್ರತಿಕ್ರಿಯೆ ಬಂದಿದೆ. ಜಪಾನ್ ಮತ್ತು ಚೈನಾದಿಂದ ಬಂದ ಕೆಲವು ಪ್ರವಾಸಿಗಳು ಯಕ್ಷಗಾನವನ್ನು ಇಷ್ಟಪಟ್ಟಿದ್ದಾರೆ. ಇವತ್ತು ಒಬ್ಬರು ಬಂದು "ಈ ಕಾರ್ಯಕ್ರಮ ಕನಿಷ್ಟ ಒಂದೂವರೆಯಿಂದ ಎರಡು ಘಂಟೆಗಳ ಕಾಲ ಅವಕಾಶ ಕೊಡಬೇಕು" ಎಂದರು. ಚೈನಾದಲ್ಲಿ ಬೀಜಿಂಗ್ ಒಪೆರಾ ನೋಡಿ, ಈ ಕಲಾ ಸಂಪ್ರದಾಯದ ಬಗ್ಗೆ ತಿಳಿದಿರುವ ಇಲ್ಲಿನ ಧ್ವನಿ ಮತ್ತು ಬೆಳಕು ತಾಂತ್ರಿಕರು "ಯಕ್ಷಗಾನ ಜನರಿಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸಲು ಬಹಳ ಪ್ರಬಲವಾದ ಮಾಧ್ಯಮ" ಎಂದು ಹೇಳಿದರು.

ಕೆರೆಮನೆ ಶಿವಾನಂದ ಹೆಗಡೆ ಹಾಗೂ ಸ೦ದರ್ಶಕರು.

ಪ್ರಶ್ನೆ : ಹೊರದೇಶಕ್ಕೆ ನೀವು ಕಲಾಪ್ರದರ್ಶನಕ್ಕೆ ಬಂದಾಗ ವಿವಿಧ ಕಾರಣಗಳಿಂದಾಗಿ ನೀವು ಕೆಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಗಿ ಬರುತ್ತದೆ. ಆ ಬಗ್ಗೆ ಸ್ವಲ್ಪ ತಿಳಿಸುತ್ತೀರಾ?

ಶಿವಾನಂದ ಹೆಗಡೆ : ಹೊರದೇಶಗಳಲ್ಲಿ ಪ್ರದರ್ಶನ ನೀಡುವಾಗ ಸಮಯಾಭಾವವಿರುತ್ತದೆ. ನಮಗೆ ನೀಡಲಾದ ಕಾಲಾವಧಿಯನ್ನು ನಾವು ಸರಿಯಾಗಿ ಪಾಲಿಸಬೇಕಾಗುತ್ತದೆ. ಇದು ನಮಗೆ ದೊಡ್ಡ ಸವಾಲು. ಅಲ್ಲದೇ ಹೊರದೇಶಗಳಲ್ಲಿ ಯಕ್ಷಗಾನ ಬಹುಜನರಿಗೆ ಪರಿಚಿತವಲ್ಲದ ಕಲಾಪ್ರಕಾರ. ಉದಾಹರಣೆಗೆ ಈ ತೆರೆದ ಸಭಾಂಗಣದಲ್ಲಿ ತೆರೆ ಎಳೆಯುವ ವ್ಯವಸ್ಥೆ ಇಲ್ಲ, ಅಕ್ಕ ಪಕ್ಕದಿಂದ ಬರುವ ಶಬ್ದಗಳು ಪ್ರದರ್ಶನಕ್ಕೆ ಅಡ್ಡಿ ಮೂಡಿಸಬಹುದು. ಇಂತಹ ಸನ್ನಿವೇಶಗಳಿಗೆ ತಕ್ಕಂತೆ ನಾವು ತಯಾರಿ ನಡೆಸಬೇಕು.

ನಮಗೆ ದೊರೆತ ಮಿತ ಕಾಲಾವಧಿಯಲ್ಲಿ ಜನರಿಗೆ ಈ ಕಲಾಪ್ರಕಾರದ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿಸುವುದು ಕೂಡ ಒಂದು ಸವಾಲು. ಇದಕ್ಕಾಗಿ ನಾವು ಸಮಾಲೋಚನೆ, ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳುತ್ತೇವೆ. ಕಳೆದ ಮೂರು ದಿನಗಳಲ್ಲಿ ಒಂದೇ ಸ್ಥಳದಲ್ಲಿ ಎಂಟು ಯಕ್ಷಗಾನಗಳನ್ನು ನೀಡಿದ ನಮಗೆ ಇಲ್ಲಿಗೆ ಬಂದ ಪ್ರೇಕ್ಷಕರಿಗೆ ಆಸಕ್ತಿ ಮೂಡಿಸಿದ ತೃಪ್ತಿ, ಸಮಾಧಾನ ನಮಗಿದೆ. ಕನ್ನಡಿಗರಲ್ಲಿ ಎಲ್ಲರೂ ಯಕ್ಷಗಾನ ನೋಡಿಲ್ಲ. ಇನ್ನೂ ಕೆಲವರು 3 ಘಂಟೆಗಳ ಅವಧಿಯ ಯಕ್ಷಗಾನ ನೋಡಿದ್ದಾರೆ. ಅವರೆಲ್ಲರಿಗೂ 45 ನಿಮಿಷಗಳ ಅವಧಿಯ ಈ ಕಾರ್ಯಕ್ರಮ ಒಂದು ಹೊಸ ಅನುಭವ.

ಪ್ರಶ್ನೆ : ನೀವು ಯಕ್ಷಗಾನವನ್ನು ಕನ್ನಡ ಅಲ್ಲದೇ ಬೇರೆ ಭಾಷೆಗಳಲ್ಲಿ ಎಲ್ಲಾದರೂ ಮಾಡಿದ್ದೀರಾ?

ಶಿವಾನಂದ ಹೆಗಡೆ : ಬೇರೆ ಮೇಳದವರು ಈ ತರಹದ ಪ್ರಯೋಗಗಳನ್ನು ಮಾಡಿದ್ದಾರೆ. ಆದರೆ ನಮ್ಮ ಮೇಳ ಇದುವರೆಗೆ ಬೇರೆ ಭಾಷೆಗಳಲ್ಲಿ ಮಾಡಿಲ್ಲ, ಮಾಡಬೇಕಾಗಿಲ್ಲವೆಂಬುದು ನಮ್ಮ ಅನಿಸಿಕೆ. ಅಭಿನಯದ ಮೂಲಕ ನಾವು ಕಥೆಯ ಸಾರವನ್ನು ಹೇಳಲು ಸಾಧ್ಯವಿದೆ. ಅಲ್ಲದೇ ನಮ್ಮ ದೇಶದಲ್ಲಿ 16 ಭಾಷೆಗಳಲ್ಲಿ ಯಕ್ಷಗಾನ ಮಾಡಬೇಕಾಗುತ್ತದೆ, ಇದು ಅಸಾಧ್ಯ ಕೆಲಸ!

ವೇದಿಕೆಯಲ್ಲಿ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯ ತ೦ಡದೊ೦ದಿಗೆ ಕೆರೆಮನೆ ಶಿವಾನಂದ ಹೆಗಡೆ

ಪ್ರಶ್ನೆ : ಕಳೆದ ಮೂರು ತಲೆಮಾರುಗಳಿಂದ ನಿಮ್ಮ ತಂಡ ಯಕ್ಷಗಾನ ಕಾರ್ಯಕ್ರಮವನ್ನು ನೀಡುತ್ತಾ ಬಂದಿದೆ. ನೀವು ಕಂಡಂತೆ, ಕೇಳಿದಂತೆ ಈ ಕಲೆಯಲ್ಲಾದ ಪ್ರಮುಖ ಬದಲಾವಣೆಗಳೇನು?

ಶಿವಾನಂದ ಹೆಗಡೆ : ನಮ್ಮ ಊರಿನಲ್ಲೇ ಇರಲಿ, ಹೊರದೇಶದಲ್ಲೇ ಇರಲಿ - ಯಕ್ಷಗಾನವನ್ನು ಹೆಚ್ಚು ಸರಳವಾಗಿ, ಮುಕ್ತವಾಗಿ (communicative) ವ್ಯಕ್ತಪಡಿಸುವ ಗುರಿ, ಪ್ರಯತ್ನ ಅಂದಿನಿಂದ ಇಂದಿನವರೆಗೆ ನಡೆದಿದೆ. ಯಾವುದೇ ವಿಷಯವೇ ಇರಲಿ - ಯಕ್ಷಗಾನದ ಸಂಪ್ರದಾಯದ ಚೌಕಟ್ಟಿನೊಳಗೆ, ಇಂದಿನ ಪೀಳಿಗೆ-ಸಮಾಜಕ್ಕೆ ಎಷ್ಟು ಪ್ರಸ್ತುತವಾಗುವಂತೆ ಪ್ರದರ್ಶಿಸುವ ಪ್ರಯತ್ನ ಮಾಡುತ್ತಿದ್ದೇವೆ. ತಂತ್ರಜ್ಞಾನವನ್ನು ಬಳಸಿ ನಾವು ಸಂಪ್ರದಾಯವನ್ನು ಉಳಿಸಿ-ಬೆಳೆಸಬೇಕೇ ಹೊರತು ಯಾವುದೇ ಕಾರಣಕ್ಕೂ ಸಂಪ್ರದಾಯಕ್ಕೆ ಹಾನಿ ಮಾಡಬಾರದು.

ಪ್ರಶ್ನೆ : ಯಕ್ಷಗಾನ, ಚಲನಚಿತ್ರ, ನೃತ್ಯ, ನಾಟಕ ಹೀಗೆ ಯಾವುದೇ ಕಲಾಪ್ರಕಾರವಿರಲಿ - ಕಾಲಕ್ಕೆ ತಕ್ಕಂತೆ ಅನೇಕ ಬದಲಾವಣೆಗಳು, commercialization ಆಗುತ್ತದೆ. ಕಮರ್ಷಿಯಲೈಸೇಶನ್ ಮಾಡದಿದ್ದರೆ ಜನಗಳನ್ನು ಆಕರ್ಷಿಸುವುದು ಕಷ್ಟ, ಮಾಡಿದರೆ ಕಲೆಯ ಸೊಗಡು ಹೊರಟು ಹೋಗುತ್ತದೆ. ಇವೆರಡರ ನಡುವೆ ಸಮತೋಲನ ಕಾಪಾಡಿಕೊಳ್ಳುವುದು ಹೇಗೆ?

ಶಿವಾನಂದ ಹೆಗಡೆ : ಒಮ್ಮೆ ಕಮರ್ಷಿಯಲೈಸೇಶನ್‌ಗೆ ಕೈಹಾಕಿದರೆ ಅದಕ್ಕೆ ಒಂದು ಇತಿ-ಮಿತಿಯಿರುವುದಿಲ್ಲ. ನನ್ನ ಅಭಿಪ್ರಾಯ - ಕಮರ್ಷಿಯಲೈಸೇಶನ್‌ನತ್ತ ಹೋಗದೇ ಸಂಪ್ರದಾಯವನ್ನು ಉಳಿಸಲು ಸಾಧ್ಯವಿದೆ. ಇದಕ್ಕೆ ನಾವು ಸಂಪ್ರದಾಯದ ಮೂಲ ಬೇರುಗಳನ್ನು ಹುಡುಕಿ, ಅಲ್ಲಿರುವ ಧನಾತ್ಮಕ ಅಂಶಗಳನ್ನು ಪ್ರಚುರ ಪಡಿಸಬೇಕಿದೆ. ಸಂಪ್ರದಾಯವೆಂದರೆ ನೀರಸವೆಂಬುದು ತಪ್ಪು ಕಲ್ಪನೆ. ನಮ್ಮ ತಂಡಕ್ಕೆ ಬರುವ ಆಹ್ವಾನಗಳನ್ನು ನೋಡಿದರೆ ನಾವು ಇನ್ನೂ ಹೆಚ್ಚಿನ ಮಟ್ಟದಲ್ಲಿ ಸಂಪ್ರದಾಯಬದ್ದರಾಗಬೇಕೆನಿಸುತ್ತದೆ. ಈ ಸಂಪ್ರದಾಯ ಒಂದು ಬಾರಿ ಕೈಬಿಟ್ಟು ಹೋದರೆ ಅದನ್ನು ಪುನಃ ತರುವುದು ಬಹಳ ಕಷ್ಟಕರವಾದದ್ದು.

ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯ ತ೦ಡ

ಪ್ರಶ್ನೆ : ನಿಮ್ಮ ತಂಡದ ಬಗ್ಗೆ ತಿಳಿಸಿ.

ಶಿವಾನಂದ ಹೆಗಡೆ : ನಮ್ಮ ತಂಡದಲ್ಲಿ ಹೊರಗಿನ ಪ್ರದೇಶಕ್ಕೆ ಹೋಗಿ ಯಕ್ಷಗಾನ ಮಾಡಬಲ್ಲ ಒಟ್ಟು ಹದಿನೈದು ಜನ ಕಲಾವಿದರಿದ್ದಾರೆ. ಇಲ್ಲಿಗೆ ಬರಲು ಕೇವಲ 12 ಜನರಿಗೆ ಮಾತ್ರ ಅವಕಾಶವಿದ್ದುದರಿಂದ 12 ಜನರ ತಂಡ ಬಂದಿದೆ. ಅಲ್ಲಿ ಯಕ್ಷಗಾನ ತರಬೇತಿ ಶಿಬಿರವಿದ್ದು ನಾವು ಉತ್ಸುಕರಿಗೆ ಯಕ್ಷಗಾನದ ತರಬೇತಿ ನೀಡುತ್ತೇವೆ. ಹೊರದೇಶ-ಪ್ರದೇಶಗಳಲ್ಲಿ ಯಕ್ಷಗಾನ ನೀಡಲು ನಾವೆಲ್ಲಾ ಸ್ವಲ್ಪ ಮಟ್ಟಿನ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ನಾನು ಸಹಕಾರೀ ಮನೋಭಾವದ, ಉತ್ತಮ ಕಲಾವಿದರನ್ನು ಇಲ್ಲಿಗೆ ಕರೆತಂದಿದ್ದೇನೆನಿಸುತ್ತಿದೆ. ಕಾರ್ಯಕ್ರಮಕ್ಕೆ ಮೊದಲು ಸಾಕಷ್ಟು ಪೂರ್ವಭ್ಯಾಸ(Rehearsal)ದ ಅಗತ್ಯವಿರುತ್ತದೆ. ಅಲ್ಲದೇ ಸಭಾಂಗಣ, ವೇದಿಕೆಯ ಮೇಲೆ ಕೂಡ ಅಭ್ಯಾಸ ನಡೆಸಬೇಕು. ನಾನು ಯಾವಾಗಲೂ ನಮ್ಮ ತಂಡದ ಕಲಾವಿದರಿಗೆ ಹೇಳುವುದಿಷ್ಟೇ - ರಂಗಸ್ಥಳದಲ್ಲಿ ಮತ್ತು ಪೂರ್ವಭ್ಯಾಸದ ಸಮಯದಲ್ಲಿ ನಮ್ಮ ಸಂಬಂಧ ವೃತ್ತಿಪರ, ಬಾಕಿಯಂತೆ ನಾವು ಸ್ನೇಹಿತರು.

ಸುರೇಶ: : ಕನ್ನಡ ಸಂಘ(ಸಿಂಗಪುರ)ದಿಂದಲೂ ನಿಮ್ಮನ್ನು ಮುಂದೊಮ್ಮೆ ಕರೆಯಿಸಿಕೊಳ್ಳುವ ಅವಕಾಶ ಒದಗಿಬರಲಿ. ಸಂದರ್ಶನಕ್ಕೆ ಅವಕಾಶ ನೀಡಿದ್ದಕ್ಕೆ ನಿಮಗೆ ಧನ್ಯವಾದಗಳು.

ಶಿವಾನಂದ ಹೆಗಡೆ : ನಿಮಗೂ ಧನ್ಯವಾದಗಳು. ಮತ್ತೆ ಭೇಟಿಯಾಗೋಣ.



ಕೃಪೆ : http://kannada.oneindia.in


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ